ಮದುವೆ ಕಾರ್ಯಕ್ರಮ ಇತ್ತು. ಪುತ್ತೂರಿಗೆ ಹೋಗುವ ಸರಕಾರಿ ಬಸ್ಸನ್ನು ಮಂಗಳೂರಿನಲ್ಲಿ ಹತ್ತಿದೆ. ಬಸ್ ನಲ್ಲಿ ಬಹುಪಾಲು ಮಹಿಳೆಯರೇ ಇದ್ರು. ಅಲ್ಲಲ್ಲಿ ಹತ್ತುವವರಲ್ಲೂ ಮಹಿಳೆಯರೇ ಹೆಚ್ಚಿದ್ರು. ಇವರಲ್ಲಿ ಹೆಚ್ಚಿನವರು ಮದುವೆಗೋ ಧಾರ್ಮಿಕ ಕಾರ್ಯಕ್ರಮಕ್ಕೋ ಅಥವಾ ಕುಟುಂಬ, ನೆಂಟರ ಮನೆಗೋ ಹೋಗುತ್ತಿರುವವರೇ ಇರಬೇಕು. ಯಾಕಂದರೆ ಹೆಚ್ಚಿನ ಎಲ್ಲರೂ ನೀಟಾದ ಬಟ್ಟೆಯನ್ನೇ ತೊಟ್ಟಿದ್ದರು ಮತ್ತು ಅವರ ಹಾವ ಭಾವಗಳಲ್ಲಿ ಸಡಗರ ಕಾಣಿಸುತ್ತಿತ್ತು. ಎಲ್ಲರೂ ಆಧಾರ್ ಕಾರ್ಡ್ ತೋರಿಸ್ತಾ ಇದ್ದರು. ಆರಾಮವಾಗಿ ಬಸ್ಸು ಹತ್ತುತ್ತಲೂ ಇಳಿಯುತ್ತಲೂ ಇದ್ದರು. ಮಾತಾಡುತ್ತಾ ನಗುತ್ತಾ ಚರ್ಚಿಸುತ್ತಾ ಇದ್ದ ಅವರಲ್ಲಿ ಉಚಿತ ಬಸ್ ಪ್ರಯಾಣದ ಸುಖ ಕಾಣಿಸ್ತಾ ಇತ್ತು. ಇವರಲ್ಲಿ ಕುತ್ತಿಗೆಗೆ ಐಡೆಂಟಿಟಿ ಕಾರ್ಡ್ ಧರಿಸಿಕೊಂಡ ಓರ್ವ ಮಹಿಳೆಯೂ ಇದ್ದರು. ಬಹುಶಃ ಸಮೀಕ್ಷೆಗಾಗಿ ಹೋಗ್ತಾ ಇರುವ ಟೀಚರ್ ಇರಬೇಕು. ಇನ್ನೊಂದು ಕಡೆ ಹಿಜಾಬ್ ಧಾರಿ ಮಹಿಳೆ ಮತ್ತು ಮುಡಿಗೆ ಹೂವಿಟ್ಟು ಲಕ್ಷಣವಾಗಿ ಸೀರೆ ಧರಿಸಿದ್ದ ಹಿಂದೂ ಮಹಿಳೆ ಇಬ್ಬರೂ ತಮ್ಮದೇ ಲೋಕದಲ್ಲಿ ಮಾತಾಡ್ತಾ ನಗುತ್ತಾ ಇದ್ದರು. ಸೆಲ್ಫಿ ತೆಗೆದುಕೊಂಡರು. ಈ ನಡುವೆ,
ಪುಟ್ಟ ಮಗುವನ್ನು ಭುಜಕ್ಕೆ ಹಾಕಿಕೊಂಡು ಮುಂಭಾಗಿಲಿನಿಂದ ಓರ್ವ ಹಿಂದೂ ಮಹಿಳೆ ಹತ್ತಿದ್ರು. ಮುಂದಿನ ಅರ್ಧಕರ್ಧ ಸೀಟಿನಲ್ಲಿ ಮಹಿಳೆಯರೇ ಕುಳಿತಿದ್ದರು. ತುಸು ರಶೂ ಇತ್ತು. ಮುಂದಿನ ಸೀಟಿನಲ್ಲಿ ಕುಳಿತವರಲ್ಲಿ ಯಾವುದೇ ಚಲನೆ ಕಾಣಿಸಲಿಲ್ಲ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹಿಜಾಬ್ ಧಾರಿ ಯುವತಿ ತಕ್ಷಣ ಎದ್ದು ಸೀಟು ಬಿಟ್ಟುಕೊಟ್ಟಳು. ಮಗುವಿನೊಂದಿಗೆ ಬಂದ ಆ ತಾಯಿ ಕುಳಿತುಕೊಂಡರು. ಕಂಡಕ್ಟ್ರು ಚೆನ್ನಾಗಿದ್ರು. ಬಿಸಿ ರೋಡ್ ಪಕ್ಕದ ಮಿತ್ತಬೈಲ್ ಮಸೀದಿಯ ಎದುರು ಸ್ಟೋಫ್ ಇದೆಯಾ ಎಂದು ಇಬ್ರು ಮಹಿಳೆಯರು ಕೇಳಿದರು. ಬಹುಶಃ ಈ ಮಸೀದಿಯ ಸಭಾಂಗಣದಲ್ಲಿ ನಡೆಯುವ ಮದುವೆ ಗಾಗಿ ಬಂದಿರಬೇಕು. ಇಲ್ಲಿ ಸ್ಟೋಪ್ ಇಲ್ಲ, ತುಸು ಮುಂದೆ ಇದೆ, ಅಲ್ಲಿಂದ ನಡ್ಕೊಂಡು ಹೋಗಬಹುದು, ತುಂಬಾ ದೂರ ಇಲ್ಲ… ಎಂದು ಅನುನಯದಿಂದಲೇ ಹೇಳಿದ್ರು. ಮಾತಿನಲ್ಲಿ ಒರಟುತನ ವಾಗಲಿ, ಅಸಹನೆಯಾಗಲಿ ಇರಲೇ ಇಲ್ಲ. ಅಂದ ಹಾಗೆ,
ಉಚಿತ ಬಸ್ ಪ್ರಯಾಣದಿಂದ ಸಾರಿಗೆ ಸಂಸ್ಥೆಗೆ ಆದಾಯ ಕಡಿಮೆಯಾಗಿರಬಹುದು. ಆದರೆ ಈ ಸೌಲಭ್ಯ ಮಹಿಳೆಯರ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ತವರು ಮನೆಗೆ, ಶುಭ ಕಾರ್ಯಕ್ರಮಗಳಿಗೆ ಮತ್ತು ತಾವು ನಂಬಿದ ಕ್ಷೇತ್ರಗಳಿಗೆ ಆರಾಮವಾಗಿ ಹೋಗಿ ಬರುವ ಧೈರ್ಯ ಈ ಸೌಲಭ್ಯದಿಂದ ಅವರಿಗೆ ದಕ್ಕಿದೆ. ಈ ಮಹಿಳಾ ಪ್ರಯಾಣಿಕರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂತೃಪ್ತಿ ಖುಷಿ ಮತ್ತು ಆನಂದವನ್ನು ಅವರ ಮುಖದಲ್ಲಿ ಖಂಡಿತ ದರ್ಶಿಸಬಹುದು. ನಿಜಕ್ಕೂ, ಬಿಟ್ಟಿ ಭಾಗ್ಯ ಎಂದು ಅವಮಾನಿಸಬೇಕಾದ ಯೋಜನೆ ಇದಲ್ಲ. ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಯಾರು ಬರೆಯುತ್ತಿದ್ದಾರೋ ಅವರ ಮನೆಯವರೇ ಈ ಬಸ್ಸಿನಲ್ಲಿ ಇರಲೂ ಬಹುದು ಎಂದು ಅನಿಸಿತು.
ಮುಖ್ಯಮಂತ್ರಿ Siddaramaiah ರಿಗೆ ಧನ್ಯವಾದ
ಏ ಕೆ ಕುಕ್ಕಿಲ