ಪೋಷಕರ ಮತ್ತು ಈ ಮಗುವಿನ ವಿರುದ್ಧ ವ್ಯಾಪಕ ಖಂಡನೆ ಮಾಡುತ್ತಿರುವ ಜನರಿಗೊಂದು ಮಾಹಿತಿ.
ಈ ಮಗುವಿನ ಸಮಸ್ಯೆ ತಂದೆ ತಾಯಿಯರ ನೈತಿಕ ಪಾಠದ ಸಮಸ್ಯೆ ಅಲ್ಲ. ಅದು ADHD / Attention Deficit Hyperactivity Disorder ಅಥವಾ ಚುರುಕುಗೇಡಿತನ.
* ಚುರುಕುಗೇಡಿತನ – ಒಂದು ಭಿನ್ನ ಶಕ್ತಿ
ಮನುಷ್ಯನ ಮನಸ್ಸು ಒಂದೇ ಮಾಪಕದಲ್ಲಿ ಅಳೆಯುವಂಥದು ಅಲ್ಲ.
ಪ್ರತಿ ಮಗು ತನ್ನದೇ ಆದ ರೀತಿಯಲ್ಲಿ ಜಗತ್ತನ್ನು ಅನುಭವಿಸುತ್ತದೆ. ಕೆಲ ಮಕ್ಕಳು ಶಾಂತವಾಗಿರುತ್ತಾರೆ, ಕೆಲವರು ಕುತೂಹಲದಿಂದ ಉತ್ಸಾಹಭರಿತರಾಗಿರುತ್ತಾರೆ. ಈ ಉತ್ಸಾಹದ ಮಿತಿಯನ್ನು ಮೀರಿ, ಅತಿಯಾದ ಚಟುವಟಿಕೆ, ಗಮನದ ಕೊರತೆ, ಮತ್ತು ತಕ್ಷಣದ ಅಥವಾ ಹಟಾತ್ ಪ್ರತಿಕ್ರಿಯೆಗಳಿಂದ ಕೂಡಿದ ವರ್ತನೆ ಕಂಡುಬಂದಾಗ ಅದನ್ನು “ಚುರುಕುಗೇಡಿತನ” (ADHD) ಎಂದು ಕರೆಯಲಾಗುತ್ತದೆ.
* ಲಕ್ಷಣಗಳು – ಮನಸ್ಸಿನ ಅನಗತ್ಯ ಕ್ರಿಯಾಶೀಲತೆ.
1. ಒಂದು ಕೆಲಸಕ್ಕೆ ಹೆಚ್ಚು ಸಮಯ ಏಕಾಗ್ರತೆ ಕಷ್ಟ.
2. ಪಾಠ, ಕಥೆ ಅಥವಾ ಮಾತು ಮಧ್ಯದಲ್ಲೇ ಮನಸ್ಸು ಬೇರೆಡೆ ಹೋಗುವುದು.
3. ಒಂದು ಜಾಗದಲ್ಲಿ ಕುಳಿತುಕೊಳ್ಳುವುದು ಕಷ್ಟ, ನಿರಂತರ ಚಲನವಲನ.
4. ಯೋಚಿಸದೆ ತಕ್ಷಣ ಪ್ರತಿಕ್ರಿಯೆ.
5. ಚಿಕ್ಕ ತಪ್ಪುಗಳಿಗೆ ಬೇಸರ, ಕೋಪ ಅಥವಾ ನಿರಾಸೆ ಮತ್ತು ಆಸ್ಫೋಟಗೊಳ್ಳುವುದು.
6. ವಸ್ತುಗಳು, ಪುಸ್ತಕಗಳು, ವಿಷಯಗಳು, ಕೆಲಸಗಳನ್ನು ಮರೆತು ಹೋಗುವುದು.
ಈ ಎಲ್ಲವೂ “ತಪ್ಪು” ಅಲ್ಲ — ಅದು ಮನಸ್ಸಿನ ಬೇರೆಯೇ ಲಯ.
* ಕಾರಣಗಳು – ಮುಖ್ಯವಾಗಿ ಇದು ನರವ್ಯವಸ್ಥೆಯ ವಿಷಯ.
ಮೆದುಳಿನ “ಡೊಪಮಿನ್” ಮತ್ತು “ನೋರೆಪಿನೆಫ್ರಿನ್” ಎಂಬ ರಾಸಾಯನಿಕಗಳ ಅಸಮತೋಲನದಿಂದ ಗಮನ ಮತ್ತು ನಿಯಂತ್ರಣದ ವ್ಯವಸ್ಥೆ ಬದಲಾಗುತ್ತದೆ.
ಹೆಚ್ಚು ಸಂದರ್ಭಗಳಲ್ಲಿ ಇದು ವಂಶಪಾರಂಪರ್ಯ, ಕೆಲವು ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಪೋಷಣೆಯಲ್ಲಿ ಅಸಮತೋಲನ, ಅಥವಾ ಸ್ಕ್ರೀನ್ ಅತಿಯಾದ ಬಳಕೆಯಿಂದ ಕೂಡ ಉಂಟಾಗಬಹುದು.
ಆದರೆ ಕಾರಣ ಹುಡುಕುವುದಕ್ಕಿಂತ ಮನಸ್ಸಿನ ಅರ್ಥಗ್ರಹಣ ಮುಖ್ಯ.
* ಪರಿಹಾರಗಳು – ಪ್ರೀತಿ, ತಾಳ್ಮೆ ಮತ್ತು ಪಾಠದ ಸಂಯೋಗ ಆಗಬೇಕು.
1. ಕೋಪವಿಲ್ಲದ ಶಿಸ್ತು: ಶಿಕ್ಷೆಗೂ ಮುಂಚೆ ಅಪ್ಪುಗೆ, ವಿವೇಕಪೂರ್ಣ ಮಾರ್ಗದರ್ಶನ.
2. ಸಣ್ಣ ಹಂತದ ಕಾರ್ಯಯೋಜನೆ: “ಒಮ್ಮೆ ಒಂದೇ ಕೆಲಸ” ಎಂಬ ನಿಯಮ.
3. ಆಟದ ಮೂಲಕ ಕಲಿಕೆ: ಕಲಿಯುವಿಕೆ = ಆನಂದ.
4. ಪ್ರೋತ್ಸಾಹ: ತಪ್ಪಿಗಿಂತ ಪ್ರಯತ್ನಕ್ಕೆ ಮೆಚ್ಚುಗೆ.
5. ಸಂತುಲನ ಆಹಾರ, ನಿದ್ರೆ ಮತ್ತು ಪ್ರಕೃತಿ ಸಂಪರ್ಕ.
6. ಮನೋವೈದ್ಯರ ಅಥವಾ ಕೌನ್ಸೆಲರ್ ಸಹಾಯ: ವರ್ತನಾ ಚಿಕಿತ್ಸೆ ಅಥವಾ ಔಷಧಿ (ಅವಶ್ಯಕತೆ ಇದ್ದರೆ).
ಹಾಗೆಯೇ ಈ ಚುರುಕುಗೇಡಿತನವು “ರೋಗ”ವಲ್ಲ — ಅದು ಮೆದುಳಿನ ವಿಭಿನ್ನ ಶೈಲಿ.
ಇಂತಹ ಮಕ್ಕಳು ಕಲ್ಪನೆ, ರಚನೆ, ನಾಯಕತ್ವ ಮತ್ತು ಹೊಸ ಆವಿಷ್ಕಾರಗಳ ಶಕ್ತಿ ಹೊಂದಿರುತ್ತಾರೆ. ಅವರಿಗೆ ಬೇಕಾದುದು ಪ್ರೀತಿ, ಸ್ವೀಕಾರ ಮತ್ತು ಮಾರ್ಗದರ್ಶನ.
“ಚುರುಕುತನವನ್ನು ಕೇಡಿತನವೆಂದು ನೋಡುವುದಿಲ್ಲ.
ಅದನ್ನು ಸೃಜನಶೀಲತೆಯ ಪ್ರವಾಹ ಎಂದು ಕಾಣೋಣ. ಆದರೆ ಅದು ಸಮಸ್ಯೆಯಾಗಿ (Disorder) ಮಗುವಿಗೂ ಮತ್ತು ಇತರರಿಗೂ ಕಾಡುವುದರಿಂದ ಚುರುಕುಗೇಡಿತನ ಎಂದು ಹೇಳುವುದು.
ಇಲ್ಲಿ ಪೋಷಕರ ತಪ್ಪು ಏನೆಂದರೆ, ಮಗು ಇಂತಹ ಸಮಸ್ಯೆ ಇದ್ದು ಇಂತಹ ದೊಡ್ಡ ವೇದಿಕೆ ಕರೆದುಕೊಂಡು ಬಂದದ್ದು. ಬಂದಿದ್ದರೂ ಅದನ್ನು ಅಲ್ಲಿನ ಜನರಿಗೆ ಅಥವಾ ಅಮಿತಾಬ್ ಅವರಿಗೂ ತಿಳಿಸದೆ ಹೋದದ್ದು. ಇಂತಹ ದೊಡ್ಡ ವೇದಿಕೆಯನ್ನು ಅಮಿತಾಬ್ psychological awareness ಬಗ್ಗೆ ಉಪಯೋಗಿಸಿಕೊಳ್ಳಬಹುದಿತ್ತು. ಆದರೆ ಅದು ಆಗಲಿಲ್ಲ.
ಒಟ್ಟಾರೆ ಇದು ಮಗುವಿನ ದುರಂಕಾರವೋ, ಪೋಷಕರ ನೈತಿಕ ಪಾಠದ ವೈಫಲ್ಯವೋ ಅಲ್ಲ. ಆದರೆ ಅವರಿಗೆ ADHD ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.
– ಯೋಗೇಶ್ ಮಾಸ್ಟರ್