ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವ ಪ್ರಿಯಾಂಕ್ ಖರ್ಗೆ, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಕೋಮುವಾದಿ ಪರಿವಾರದ ಕೇಂದ್ರ ಬಿಂದು Rss ವಿರುದ್ದದ ಸೈದ್ದಾಂತಿಕ ಸಮರವನ್ನು ಮುಂದುವರಿಸಿದ್ದಾರೆ. ಅದಕ್ಕಾಗಿ Rss ಬೆಂಬಲಿತ ಗುಂಪುಗಳ ಅಸಹನೆಗೆ ಗುರಿಯಾಗಿದ್ದಾರೆ, ಅಸಹ್ಯ ಟ್ರೋಲ್ ಗಳು, ಬೆದರಿಕೆ, ನಿಂದನೆ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ.
ಆದರೆ, ಕಾಂಗ್ರೆಸ್ ನ ದೊಡ್ಡ ವಿಭಾಗ ಪ್ರತಿಕ್ರಿಯಿಸದೆ, ತಮ್ಮ ನಾಯಕರ ಪರವಾಗಿ ನಿಲ್ಲದೆ ಮೌನ ವಹಿಸಿದೆ. ಮೊನ್ನೆಯಷ್ಟೆ ಬಹಳಷ್ಟು ಜನ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರುಗಳಾಗಿ ಗೂಟದ ಕಾರುಗಳುಲ್ಲ ಅಧಿಕಾರವನ್ನು ಪಡೆದರು, ಲಾಭದಾಯಕ ಆಯೋಗದ ಸದಸ್ಯರುಗಳಾದರು, ಇವರುಗಳು ಒಬ್ಬರಾದರು Rss ಕುರಿತಾದ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರಾ ? ಪ್ರಿಯಾಂಕ್, ಹರಿಪ್ರಸಾದ್ ರಕ್ಷಣೆಗೆ ಧಾವಿಸಿದ್ರಾ ?
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೆ ಮೊನ್ನೆ ಮಂಡಳಿ, ಪ್ರಾಧಿಕಾರ, ನಿಗಮ ನೇಮಕಾತಿಯಲ್ಲಿ ಹನ್ನೊಂದು ಜನ ಕಾಂಗ್ರೆಸ್ ಪ್ರಮುಖರು ಲಾಭದಾಯಕವಾದ ಅಧಿಕಾರ ಸ್ಥಾನವನ್ನು ಪಡೆದರು. ಅವರಿಗೆಲ್ಲಾ ಈ ಸೈದ್ದಾಂತಿಕ ಸಂಘರ್ಷದಲ್ಲಿ ತಮ್ಮ ಪಕ್ಷದ ನಾಯಕರ ಜೊತೆಗೆ, ಪಕ್ಷದ ರಾಜಕೀಯ ನಿಲುವಿನ ಜೊತೆಗೆ ನಿಲ್ಲುವ, ಧ್ವನಿ ಎತ್ತುವ ಜವಾಬ್ದಾರಿ ಇಲ್ಲವೆ ? ಕಾಂಗ್ರೆಸ್ ನಿಂದ ಅಧಿಕಾರ ಪಡೆದವರು ಕೋಮುವಾದ, ಫ್ಯಾಸಿಸಂ ವಿರುದ್ದ ನಿಲ್ಲುವುದಿಲ್ಲ, Rss ಕುರಿತು ಮೃದುವಾಗಿರುತ್ತೇವೆ/ಮೌನವಾಗಿ ಇರುತ್ತೇವೆ ಅಂದರೆ ಏನರ್ಥ ? ಕರಾವಳಿಯಲ್ಲಿ ಕೋಮುವಾದದ ವಿರುದ್ದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಡಪಂಥೀಯರು, ಸೆಕ್ಯುಲರ್ ಗಳನ್ನೆ ವಿರೋಧಿಗಳಂತೆ ಕಾಣುತ್ತಾರೆ, ಅಂತರ ಕಾಯ್ದುಕೊಳ್ಳುತ್ತಾರೆ ಅಂತಾದರೆ ಬಿ ಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆಯವರು ಕೋಮುವಾದದ ವಿರುದ್ದ ನಡೆಸುತ್ತಿರುವ ಸೈದ್ದಾಂತಿಕ ಹೋರಾಟದಲ್ಲಿ ಮೇಲುಗೈ ಸಾಧಿಸುವುದು ಬಿಡಿ, ಕಾಂಗ್ರೆಸ್ ಪಕ್ಷ ಬಿಜೆಪಿ ಎದುರು ರಾಜಕೀಯವಾಗಿ ಎದ್ದು ನಿಲ್ಲಲು, ಗೆಲ್ಲಲು ಸಾಧ್ಯವೆ ?
ಮುನೀರ್ ಕಾಟಿಪಳ್ಳ