ಟೆಸ್ಟ್ ಶತಕ ಬಾರಿಸಿದವನಿಗೆ..
ರಣಜಿ ಟ್ರೋಫಿಯಲ್ಲಿ ರನ್ ಹೊಳೆಯನ್ನೇ ಹರಿಸಿದವನಿಗೆ ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಅರ್ಹತೆ ಇಲ್ಲವೆಂದರೆ..?
ಭಾರತೀಯ ಕ್ರಿಕೆಟ್’ನಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯಕ್ಕೆ ಮತ್ತೊಬ್ಬ ಬಲಿಪಶು ಈ ಹುಡುಗ..
2024ರಲ್ಲಿ ಭಾರತ 46 ರನ್ನಿಗೆ ಆಲೌಟಾದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್’ನಲ್ಲಿ ಅವನು 150 ರನ್ ಬಾರಿಸಿದ್ದ. ಭಾರತ ತಂಡಕ್ಕೆ ಆಯ್ಕೆಯಾಗಿದ್ದು pure meritನೊಂದಿಗೆ. ರಣಜಿ ಕ್ರಿಕೆಟ್’ನಲ್ಲಿ ಸಾವಿರಗಟ್ಟಲೆ ರನ್’ಗಳು, ಸಾಲು ಸಾಲು ಶತಕಗಳು.. ದೊಡ್ಡ ದೊಡ್ಡ ಇನ್ನಿಂಗ್ಸ್’ಗಳೇ ಅವನಿಗೆ ಟೆಸ್ಟ್ ಕ್ಯಾಪ್ ಸಿಗುವಂತೆ ಮಾಡಿದ್ದು. ಅಂಥಾ ಆಟಗಾರನಿಗೆ ಈಗ ಭಾರತ ಎ ತಂಡದಲ್ಲೇ ಸ್ಥಾನವಿಲ್ಲವೆಂದರೆ..? ನಂಬಲಸಾಧ್ಯ..
ಉತ್ತರ ಪ್ರದೇಶ ಮೂಲದ ಮುಂಬೈ ಹುಡುಗ ಸರ್ಫರಾಜ್ ಖಾನ್’ಗೆ ಆಗಿರುವ ಅನ್ಯಾಯವನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನು “mystery’’ ಎಂದು ಕರೆದಿದ್ದಾರೆ ನೇರ ನುಡಿಗೆ ಹೆಸರಾಗಿರುವ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್. ಸರ್ಫರಾಜನಿಗೆ ಆಗಿರುವ ಅನ್ಯಾಯದ ಬಗ್ಗೆ ಸುನಿಲ್ ಗವಾಸ್ಕರ್ ಧ್ವನಿ ಎತ್ತಿದ್ದಾರೆ.
ಸರ್ಫರಾಜ್ ಖಾನ್’ಗೆ ಆಗಿರುವ ಅನ್ಯಾಯ, ಕೇವಲ ಅವನಿಗಷ್ಟೇ ಅನ್ಯಾಯವಲ್ಲ.. ರಣಜಿ ಟ್ರೋಫಿ, ದೇಶೀಯ ಕ್ರಿಕೆಟ್’ನ ಸಾಧನೆಗೆ ಮಾಡಿರುವ ಅಪಮಾನ.
2022-23ರಿಂದ 2024-25ರ ರಣಜಿ ಟೂರ್ನಿಯಲ್ಲಿ 1600ಕ್ಕೂ ಹೆಚ್ಚು ರನ್.
ರಣಜಿ ಟ್ರೋಫಿ 2019-20:
6 ಪಂದ್ಯ, 928 ರನ್, 154.66 ಸರಾಸರಿ, 3 ಶತಕ
ರಣಜಿ ಟ್ರೋಫಿ 2021-22:
6 ಪಂದ್ಯ, 982 ರನ್, 122.75 ಸರಾಸರಿ, 3 ಶತಕ
ರಣಜಿ ಟ್ರೋಫಿ 2022-23:
6 ಪಂದ್ಯ, 556 ರನ್, 92.66 ಸರಾಸರಿ, 3 ಶತಕ
ರಣಜಿ ಟ್ರೋಫಿ 2023-24:
3 ಪಂದ್ಯ, 200 ರನ್, ಸರಾಸರಿ 100
ಪ್ರಥಮದರ್ಜೆ ಕ್ರಿಕೆಟ್ ಸಾಧನೆ: 55 ಪಂದ್ಯ, 4,685 ರನ್, 65.98 ಸರಾಸರಿ, 16 ಶತಕ.
ಇದೇ ವರ್ಷ ಇಂಗ್ಲೆಂಡ್’ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 92 ರನ್ (ಭಾರತ ಎ ಪರ) ಬಾರಿಸಿದ್ದ ಸರ್ಫರಾಜ್ ಖಾನ್.
ಆಟಕ್ಕಿಂತ ಅವನ ಫಿಟ್ನೆಸ್ ಬಗ್ಗೆ ಕೆಲವರಿಗೆ ತಕರಾರಿತ್ತು. 17 ಕೆ.ಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್ ಅದನ್ನೂ ಸರಿಪಡಿಸಿಕೊಂಡ.
ಇಷ್ಟರ ಮಧ್ಯೆಯೂ ಭಾರತ ಎ ತಂಡಕ್ಕೂ ಅವನು ಬೇಡವಾಗಿದ್ದಾನೆ ಎಂದರೆ, ಇದರ ಹಿಂದೆ ಕ್ರಿಕೆಟ್ ಹೊರತಾದ ಕಾರಣವಿರಲೇಬೇಕು. ಆ ಕಾರಣ ಏನೆಂಬುದನ್ನು ಆಯ್ಕೆ ಮಾಡಬೇಕಾದ ಸ್ಥಾನದಲ್ಲಿರುವವರು ಅನಾವರಣ ಮಾಡಲೇಬೇಕು. ಇಲ್ಲವಾದಲ್ಲಿ ರಣಜಿ ಕ್ರಿಕೆಟ್ ಸಾಧನೆಗಳಿಗೆ ಬೆಲೆಯೇ ಇರುವುದಿಲ್ಲ. ದೇಶೀಯ ಕ್ರಿಕೆಟ್’ನಲ್ಲಿ ರನ್ ಹೊಡೆದರೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆಯೂ ಸುಳ್ಳಾಗಬಹುದು.
-ಸುದರ್ಶನ್