ಡಂಬುಲ (ಶ್ರೀಲಂಕಾ): ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಭಾರತ, ವನಿತಾ ಏಷ್ಯಾ ಕಪ್ ಕ್ರಿಕೆಟ್ ಕೂಟದ ತನ್ನ ಆರಂಭಿಕ ಪಂದ್ಯ ದಲ್ಲಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಬಗ್ಗು ಬಡಿದಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಹರ್ಮನ್‌ಪ್ರೀತ್ ಕೌರ್ ಬಳಗ ಅಮೋಘ ಪ್ರದರ್ಶನ ನೀಡಿತು.
ಶುಕ್ರವಾರ “ರಣಗಿರಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ನಡೆದ “ಎ’ ವಿಭಾಗದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 19.2 ಓವರ್‌ಗಳಲ್ಲಿ 108ಕ್ಕೆ ಕುಸಿದರೆ, ಭಾರತ 14.1 ಓವರ್‌ಗಳಲ್ಲಿ 3 ವಿಕೆಟಿಗೆ 109 ರನ್ ಬಾರಿಸಿತು.ಭಾರತ ತನ್ನ ದ್ವಿತೀಯ ಪಂದ್ಯವನ್ನು ರವಿವಾರ ಯುಎಇ ವಿರುದ್ಧ ಆಡಲಿದೆ
ಚೇಸಿಂಗ್ ವೇಳೆ ಶಫಾಲಿ ವರ್ಮ ಮತ್ತು ಸ್ಮತಿ ಮಂಧನಾ ಬಿರುಸಿನ ಆಟಕ್ಕಿಳಿದರು. ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಹರಿದು ಬಂತು. ಅಷ್ಟರಲ್ಲೇ ಭಾರತದ ಆರಂಭಿಕರು 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು.
ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 85 ರನ್ ಒಟ್ಟುಗೂಡಿತು. ಆಗ ಅರ್ಧ ಶತಕದ ಹಾದಿಯಲ್ಲಿದ್ದ ಮಂಧನಾ ಔಟಾದರು. 31 ಎಸೆತ ಎದುರಿಸಿದ ಮಂಧನಾ 9 ಬೌಂಡರಿ ನೆರವಿನಿಂದ 45 ರನ್ ಹೊಡೆದರು. ಶಫಾಲಿ ವರ್ಮ ಅವರಿಗೂ ಅರ್ಧ ಶತಕ ಒಲಿಯಲಿಲ್ಲ. ಅವರ ಗಳಿಕೆ 40 ರನ್ (29 ಎಸೆತ, 6 ಬೌಂಡರಿ, 1 ಸಿಕ್ಸರ್). ಡಿ. ಹೇಮಲತಾ 14 ರನ್ ಮಾಡಿ ವಾಪಸಾದರು.
ಪಾಕಿಸ್ಥಾನಕ್ಕೆ ಕಡಿವಾಣ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ಥಾನಕ್ಕೆ ಯೋಜನೆಯಂತೆ ಆಡಲು ಸಾಧ್ಯವಾಗಲಿಲ್ಲ. ಭಾರತದ ಬಿಗಿಯಾದ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿತು. ದೀಪ್ತಿ ಶರ್ಮ (3), ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ಸೇರಿಕೊಂಡು (ತಲಾ 2 ವಿಕೆಟ್) ಭರ್ಜರಿ ಕಡಿವಾಣ ಹಾಕಿದರು
ದ್ವಿತೀಯ ಓವರ್‌ನಲ್ಲೇ ಪೂಜಾ ವಸ್ತ್ರಾಕರ್ ಪಾಕಿಸ್ಥಾನ ಕುಸಿತಕ್ಕೆ ನಾಂದಿ ಹಾಡಿದರು. ಈ ಆಘಾತದಿಂದ ಪಾಕ್ ಚೇತರಿಸಿಕೊಳ್ಳಲೇ ಇಲ್ಲ. 25 ರನ್ ಗಳಿಸಿದ ವನ್‌ಡೌನ್ ಆಟಗಾರ್ತಿ ಸಿದ್ರಾ ಅಮೀನ್ ಅವರದೇ ಹೆಚ್ಚಿನ ಗಳಿಕೆ. ತುಬಾ ಹಸನ್ ಮತ್ತು ಫಾತಿಮಾ ಸನಾ ತಲಾ 22 ರನ್ ಕೊಡುಗೆ ಸಲ್ಲಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು.
ಪಾಕ್ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೋರ್ವ ಆಟಗಾರ್ತಿ ಕೀಪರ್ ಮುನೀಬಾ ಅಲಿ (11). ಮೂವರು ರನ್ ಖಾತೆ ತೆರೆಯಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-19.2 ಓವರ್‌ಗಳಲ್ಲಿ 108 (ಸಿದ್ರಾ ಅಮೀನ್ 25, ತುಬಾ ಹಸನ್ 22, ಫಾತಿಮಾ ಸನಾ ಔಟಾಗದೆ 22, ದೀಪ್ತಿ 20ಕ್ಕೆ 3, ಶ್ರೇಯಾಂಕಾ 14ಕ್ಕೆ 2, ರೇಣುಕಾ 14ಕ್ಕೆ 2, ಪೂಜಾ 31ಕ್ಕೆ 2). ಭಾರತ-14.1 ಓವರ್‌ಗಳಲ್ಲಿ 3 ವಿಕೆಟಿಗೆ 109 (ಮಂಧನಾ 45, ಶಫಾಲಿ 40, ಅರೂಬ್ ಶಾ 9ಕ್ಕೆ 2).
ಪಂದ್ಯಶ್ರೇಷ್ಠ: ದೀಪ್ತಿ ಶರ್ಮ
ಯುಎಇಯನ್ನು ಮಣಿಸಿದ ನೇಪಾಲ
ಡಂಬುಲ (ಶ್ರೀಲಂಕಾ): ಏಷ್ಯಾ ಕಪ್ ಮೊದಲ ಪಂದ್ಯದಲ್ಲಿ ನೇಪಾಲ 6 ವಿಕೆಟ್‌ಗಳಿಂದ ಯುಎಇಯನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಯುಎಇ 8 ವಿಕೆಟಿಗೆ 115 ರನ್ ಮಾಡಿದರೆ, ನೇಪಾಲ 16.1 ಓವರ್‌ಗಳಲ್ಲಿ 4 ವಿಕೆಟಿಗೆ 118 ರನ್ ಬಾರಿಸಿತು.
ನೇಪಾಲ ಪರ ಮಿಂಚಿದವರೆಂದರೆ ನಾಯಕಿಯೂ ಆಗಿರುವ ಮಧ್ಯಮ ವೇಗಿ ಇಂದು ಬರ್ಮ ಮತ್ತು ಓಪನರ್ ಸಮ್ಜಾನಾ ಖಡಾ. ಇಂದು ಬರ್ಮ 19ಕ್ಕೆ 3 ವಿಕೆಟ್ ಉರುಳಿಸಿದರೆ, ಸಮ್ಜಾನಾ ಖಡಾR ಅಜೇಯ 72 ರನ್ ಬಾರಿಸಿದರು. 45 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಸೇರಿತ್ತು. ಖಡಾR ಹೊರತು ಪಡಿಸಿ ಉಳಿದವರ್ಯಾರೂ ನೇಪಾಲದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಲಿಲ್ಲ. ಉರುಳಿದ 4 ವಿಕೆಟ್‌ಗಳಲ್ಲಿ 3 ಕವಿಶಾ ಎಗೋಡಗೆ ಪಾಲಾಯಿತು. ಯುಎಇ ಪರ ಖುಶಿ ಶರ್ಮ 36, ಕವಿತಾ 22 ರನ್ ಮಾಡಿದರು.