ಉಳ್ಳಾಲ: ಸಾಮಾನ್ಯವಾಗಿ ಬೀಚ್ ಎಂದ ತಕ್ಷಣ ಸ್ವಚ್ಛಂದವಾಗಿ ಸುತ್ತಮುತ್ತಲು ಮರ ಗಿಡಗಳು, ಪಾರ್ಕು, ಮಕ್ಕಳಿಗೆ, ಹಿರಿಯರಿಗೆ ಸಮಯವನ್ನು ಕಳೆಯುವ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ. ದೂರದೂರಿನಿಂದ ಬರುವ ಪ್ರವಾಸಿಗರಿಗೆ ಸಮಯವನ್ನು ಆನಂದವಾಗಿ ಕಳೆಯಲಿಕ್ಕಿರುವ ಸುಂದರ ತಾಣ. ಆದರೆ ಉಳ್ಳಾಲ ಬೀಚ್ ಅವೆಲ್ಲದಕ್ಕೂ ತದ್ವಿರುದ್ಧವಾಗಿ ತುಂಬಾ ಭಿನ್ನವಾಗಿದೆ. ಎಲ್ಲೆಲ್ಲೂ ನೋಡಿದರೂ ಕಸ ಕಡ್ಡಿ, ಮಳೆಗಾಲದ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ದೂರದೂರಿನಿಂದ ಬರುವ ಪ್ರವಾಸಿಗರು ಯಾಕಾದರೂ ಇಲ್ಲಿಗೆ ಬಂದು ಬಿಟ್ಟವೆಯಲ್ಲ ಎಂದು ಶಪಿಸಿ ಹೋಗುವಂಥ ಪರಿಸ್ಥಿತಿ.
ಉಳ್ಳಾಲ ಬೀಚಿನದ್ದು ಇವತ್ತು ನಿನ್ನೆಯ ಸಮಸ್ಯೆ ಅಲ್ಲ. ಶಾಸಕ ಯು.ಟಿ ಖಾದರ್ ನಾಲ್ಕು ಬಾರಿ ಗೆದ್ದು ಬೀಗಿದ ಕ್ಷೇತ್ರವಿದು. ಇಲ್ಲಿ ಅಭಿವೃದ್ಧಿ ಎಂಬುದು ಕೇವಲ ಮರೀಚಿಕೆಯಾಗಿ ಬಿಟ್ಟಿವೆ. ಕಳೆದ ಹತ್ತು ವರ್ಷಗಳಿಂದಲೂ ಬೀಚ್ ಸುತ್ತಮುತ್ತ ಗಬ್ಬೆತ್ತು ನಾರುವ ಕಸದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ ಈ ಬಗ್ಗೆ ಇಲ್ಲಿಯವರೆಗೂ ಸ್ಪೀಕರ್ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ಗಮನಕ್ಕೆ ತರಲೇ ಇಲ್ಲ.
ದಿನನಿತ್ಯ ಸಾವಿರಾರು ಜನ ಭೇಟಿ ನೀಡುವ ಸ್ಥಳವಿಂದು ರೋಗಗಳ ಕೇಂದ್ರ ಬಿಂದುವಾಗಿದ್ದು ದುರಷ್ಟಕರ ಸಂಗತಿ ಎಂದೇ ಹೇಳಬಹುದು. ಕಸ ಕಡ್ಡಿಗಳು, ಬೀದಿ ನಾಯಿಗಳ ಹಾವಳಿ, ಸಾರ್ವಜನಿಕ ಶೌಚಾಲಯ ಅಥವಾ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ತೀರಾ ಗಲೀಜಾಗಿದೆ. ಸನ್ಮಾನ್ಯ ಸ್ಪೀಕರ್ ಅವರು ಇನ್ನಾದರೂ ಆ ಸ್ಥಳಕ್ಕೆ ಭೇಟಿ ನೀಡಿ ಸರಿಯಾಗಿ ಪರಿಶೀಲನೆ ನಡೆಸಿ ಇತಿಹಾಸ ಪ್ರಸಿದ್ಧ ಉಳ್ಳಾಲದ ಗೌರವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗಿದೆ.