ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಅಗಲಗೊಳಿಸಲು ಗುಡ್ಡವನ್ನು ಅಗೆದಿರುವ ಭಾಗದಲ್ಲಿ ಶುಕ್ರವಾರ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ.
ಕಾಮಗಾರಿಗಾಗಿ ಗುಡ್ಡದ ಭಾಗವನ್ನು ಹಂತ ಹಂತವಾಗಿ ಅಗೆಯಲಾಗಿದ್ದು, ಶುಕ್ರವಾರ ಸಂಜೆ ವೇಳೆ ಮೇಲಿನ ಭಾಗದಿಂದ ಮಣ್ಣು ಜರಿದು ಬಿದ್ದಿದೆ. ವಿಪರೀತ ಮಳೆಯಿಂದ ಮಣ್ಣು ಸಡಿಲವಾಗಿದ್ದು, ಹಂತ ಹಂತವಾಗಿ ಮಣ್ಣು ಜರಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಜರಿದ ಮಣ್ಣು ಮೇಲ್ಭಾಗದಲ್ಲೇ ನಿಂತಿದ್ದು, ದೊಡ್ಡ ಮಟ್ಟದಲ್ಲಿ ಕುಸಿತ ಉಂಟಾದರೆ ರಸ್ತೆಗೆ ಜರಿದು ಬೀಳುವ ಸಾಧ್ಯತೆಯಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಯಿಂದಲೇ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ
ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಉಪ ವಿಭಾಗಾಧಿಕಾರಿ ಹರ್ಷವರ್ಧನ್, ಮನಪಾ ಸದಸ್ಯೆ ಹೇಮಲತಾ ಸಾಲ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.