ನನಗಿನ್ನೂ ಮದುವೆ ಆಗಿಲ್ಲ, ಸದ್ಯಕ್ಕೆ ಸಿಂಗಲ್ ಹಕ್ಕಿ. ಮದುವೆ ಬಗ್ಗೆ ನನಗೂ ಒಂದಷ್ಟು ಅಭಿಪ್ರಾಯಗಳಿವೆ. ನನ್ನವಳು ಹೇಗಿರಬೇಕು, ನನ್ನ ಜೊತೆ ಅವಳು ಹೇಗಿರಬೇಕು ಅನ್ನೋಕಿಂತ ನಾನು ಅವಳ ಜೊತೆ ಹೇಗಿರಬೇಕೆಂಬ ಒಂದಷ್ಟು ಯೋಚನೆಗಳು ನನ್ನಲ್ಲಿವೆ. ಆದರೆ ಸುತ್ತಲಿನ ಸಮಾಜ, ಜನರ ಮದುವೆ, ಅಲ್ಲಿನ ನಾಟಕಗಳನ್ನ ನೋಡಿದಾಗಲೆಲ್ಲಾ ನನ್ನ ತಲೆಗೊಂದು ಯೋಚನೆ ಬರುತ್ತೆ. ಎಂತೆಂತಹ ಅದ್ಭುತ ಜೋಡಿಗಳು, ಅನ್ಯೋನ್ಯವಾಗಿದ್ದ ಸಂಸಾರಗಳು ಬರೀ ಇಗೋ ಇಂದ, ಕಾಮದ ಗೀಳಿನಿಂದ, ಬೆನ್ನಿಗೆ ಚೂರಿ ಹಾಕುವ ದ್ರೋಹದಿಂದ ಸರ್ವನಾಶ ಆಗಿದ್ದನ್ನ ನೋಡಿದ್ದೇನೆ. ಬಹಳಷ್ಟು ಈ ತರಹದ ನ್ಯೂಜ್ಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೀವೂ ನೋಡುತ್ತಿರುತ್ತೀರಿ.
ನಾನು ಗಮನಿಸಿದ ಹಾಗೆ ಇವತ್ತು ಹುಡುಗರು ಹುಡುಗಿಯರನ್ನು ನೋಡೋ ರೀತಿ, ಮತ್ತು ಹುಡುಗಿಯರು ಹುಡುಗರನ್ನು ಅಳೆಯೋ ಮಾನದಂಡ ಸಂಪೂರ್ಣ ಬದಲಾಗಿಬಿಟ್ಟಿದೆ. ಮದುವೆ ಅನ್ನೋದು ಈಗೊಂದು ಇಂಟರ್ನೆಟ್ ಫ್ಯಾಷನ್ ಶೋ! ಇನ್‌ಸ್ಟಾಗ್ರಾಂನಲ್ಲಿ ಹಾಕುವ ಫೋಟೋಗೆ ನೂರು ಲೈಕ್ಸ್ ಬರಬೇಕು, ಪ್ರೀ-ವೆಡ್ಡಿಂಗ್ ಶೂಟ್‌ನಲ್ಲಿ ಹೀರೋ-ಹೀರೋಯಿನ್ ತರಹ ಕಾಣಬೇಕು, ಸ್ನೇಹಿತರು ಜೋಡಿ ಸೂಪರ್ ಅಂತ ಕಮೆಂಟ್ ಹೊಡೆಯಬೇಕು. ಆದರೆ ನನಗೊಂದು ಪ್ರಶ್ನೆ ಇದೆ.. ನೀವು ಜೀವನಪೂರ್ತಿ ನಿಮ್ಮ ಕಷ್ಟ-ಸುಖದಲ್ಲಿ ಜೊತೆಗೆ ಇರೋ ವ್ಯಕ್ತಿಯನ್ನು ಆರಿಸಿಕೊಳ್ಳುತ್ತಿದ್ದೀರಾ? ಅಥವಾ ಸೋಶಿಯಲ್ ಮೀಡಿಯಾ ಫೋಟೋದಲ್ಲಿ ನಿಮ್ಮ ಪಕ್ಕ ನಿಲ್ಲೋಕೆ ಚೆನ್ನಾಗಿ ಕಾಣೋ Show piece ಗೊಂಬೆಯನ್ನು ಆರಿಸಿಕೊಳ್ಳುತ್ತಿದ್ದೀರಾ?
ಒಮ್ಮೆ ಈ ಡೇಟಾವನ್ನು ನೋಡಿ…
ಅಮೆರಿಕಾದಲ್ಲಿ ಇಂದು ಶೇಕಡಾ 40-50ರಷ್ಟು ಮದುವೆಗಳು ಡಿವೋರ್ಸ್‌ನಲ್ಲಿ ಮುಗಿಯುತ್ತಿವೆ. ನಾವು ಭಾರತೀಯರು ಬಹಳ ಸೇಫ್ ಅಂದುಕೊಳ್ಳಬೇಡಿ. ಕೇರಳದಲ್ಲಿ 2018ರಲ್ಲಿ ಸುಮಾರು 34 ಸಾವಿರ ವಿಚ್ಛೇದನ ಅರ್ಜಿಗಳಿದ್ದವು, 2024ಕ್ಕೆ ಅದು 64 ಸಾವಿರದ ಗಡಿ ದಾಟಿದೆ it means 87% Growth! ಹೈದರಾಬಾದ್, ಬೆಂಗಳೂರಿನಂತಹ ದೊಡ್ಡ ಸಿಟಿಗಳಲ್ಲಿ ವಿಚ್ಛೇದನ ಅರ್ಜಿಗಳು ವರ್ಷದಿಂದ ವರ್ಷಕ್ಕೆ 25% ಏರುತ್ತಿವೆ. ಆದರೆ ಆಶ್ಚರ್ಯದ ಸಂಗತಿ ಎಂದರೆ, ಈ ಡಿವೋರ್ಸ್ ರೇಸ್‌ಗೆ ಕಂಪೇರ್ ಮಾಡಿದರೆ ನಮ್ಮ ಕರ್ನಾಟಕದ ಪರಿಸ್ಥಿತಿ ಎಷ್ಟೋ ಬೆಟರ್.. ರಾಜ್ಯಾದ್ಯಂತ ವಿಚ್ಛೇದನದ ಅರ್ಜಿಗಳು 2022 ರಲ್ಲಿ ಬರೋಬ್ಬರಿ 66,863 ಕ್ಕೆ ಏರಿತ್ತು! 2023 ರಲ್ಲಿ 41,230 ಮತ್ತು 2024 ರಲ್ಲಿ 36,952 ಕ್ಕೆ ಕೊಂಚ ಇಳಿದರೂ, 2025 ರ ಆರಂಭದಿಂದ ಆ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರುವುದು ಒಳ್ಳೆಯ ಸೂಚನೆ ಅಂತೂ ಅಲ್ಲ.
ಯಾಕೆ ಹೀಗಾಗ್ತಿದೆ? ಈ ಜನ ಮದುವೆಯಾಗುವಾಗ ಒಬ್ಬರನ್ನೊಬ್ಬರು ನೋಡಿರಲಿಲ್ಲವೇ? ಖಂಡಿತಾ ನೋಡಿದ್ದರು. ಭರ್ಜರಿಯಾಗಿ ಹನಿಮೂನ್‌ಗೂ ಹೋಗಿದ್ದರು. ಆದರೆ ಮದುವೆ ಮುರಿಯೋದು ಮುಖದ ಸೌಂದರ್ಯ ಮಾಸಿದಾಗ ಅಲ್ಲ… ಸಂಬಂಧದ ಅಕೌಂಟಲ್ಲಿ ಪ್ರೀತಿ ಖಾಲಿ ಆದಾಗ, ನಂಬಿಕೆ ಒಡೆದಾಗ, ಗೌರವ ಕಳೆದುಹೋದಾಗ, ಪ್ರಾಮಾಣಿಕತೆ ಸತ್ತಾಗ!
ಇನ್ನೊಂದು ಕಟುಸತ್ಯ ಏನೆಂದರೆ ಇವತ್ತು ನಮ್ಮ ಸಮಾಜವನ್ನ, ಸಂಸ್ಕೃತಿಯನ್ನ ಕ್ಯಾನ್ಸರ್ ತರಹ ತಿನ್ನುತ್ತಿರೋದು ಈ Extra marital affairs ನಮ್ಮ ಭಾಷೆಯಲ್ಲಿ ಹೇಳೋದಾದ್ರೆ ಅಕ್ರಮ ಸಂಬಂಧಗಳು! ಸಂಗಾತಿ ಜೊತೆಗಿದ್ದರೂ.. ಒಬ್ಬರಿಂದ ತಾಳಿ ಕಟ್ಟಿಸಿಕೊಂಡು ಇನ್ನೊಬ್ಬನ ಜೊತೆ ಸುತ್ತೋದು, ಅಥವಾ ಹೆಂಡತಿಗೆ ಸುಳ್ಳು ಹೇಳಿ ಮತ್ತೊಬ್ಬಳ ಹಾಸಿಗೆ ಹಂಚಿಕೊಳ್ಳೋದು ಇದೆಯಲ್ಲ, ಇದು ಬರೀ ನಂಬಿಕೆ ದ್ರೋಹ ಅಲ್ಲ, ಇದು ಮನುಷ್ಯತ್ವಕ್ಕೇ ಮತ್ತು ಆ ಒಂದು ಸಂಬಂಧಕ್ಕೆ ಮಾಡೋ ಅತಿ ದೊಡ್ಡ ಅಪಮಾನ! ಮತ್ತು ತಮ್ಮ ಬದುಕಿಗೆ ತಾವೇ ಮಾಡಿಕೊಳ್ಳುವ ಮೋಸ. ಒಂದು ಕುಟುಂಬಕ್ಕಾಗಿ, ಮಕ್ಕಳಿಗಾಗಿ ಬದುಕಿನಲ್ಲಿ ಶಿಸ್ತು ತಂದುಕೊಳ್ಳದ ಇಂತಹವರಿಗೆ ಮದುವೆ ಮತ್ತು ಕುಟುಂಬವಾದರೂ ಏಕೆ?
ಕಾಮ ಅನ್ನೋದೇ ಜೀವನ ಅಲ್ಲ. ಕೇವಲ ದೇಹದ ಹಸಿವಿಗಾಗಿ, ಕ್ಷಣಿಕ ಸುಖಕ್ಕಾಗಿ ವರ್ಷಗಟ್ಟಲೆ ಕಟ್ಟಿದ ಸಂಸಾರವನ್ನ ಬೀದಿಗೆ ತರುವ ಈ ವಿಕೃತಿಯಿಂದ ನಾವು ಮುಂದಿನ ಪೀಳಿಗೆಗೆ ಯಾವ Morals ಹೇಳಿಕೊಡ್ತೀವಿ? ಈ ನಾಟಕ ನೋಡಿ ಬೆಳೆಯುವ ಮಕ್ಕಳು ನಾಳೆ ಸಂಬಂಧಗಳ ಮೇಲೆ ನಂಬಿಕೆ ಇಡ್ತಾರಾ? ಖಂಡಿತ ಇಲ್ಲ. ಎಲ್ಲಿ ಕಾಮ ಮೇಲುಗೈ ಸಾಧಿಸುತ್ತದೋ, ಅಲ್ಲಿ ಪ್ರೀತಿ, ಸಂಸಾರ ಮತ್ತು ಸಂಸ್ಕಾರ ಮೂರೂ ಬೆಂಕಿಗೆ ಬಿದ್ದಂತೆ.
- ಸಮಸ್ಯೆ ಎಲ್ಲಿಂದ ಉಲ್ಬಣಗೊಂಡಿದೆ ಅಂದ್ರೆ ಇವತ್ತು ಸಾಮಾಜಿಕ ಜಾಲತಾಣಗಳು ನಮಗೆ ಸಾವಿರಾರು ಆಯ್ಕೆಗಳನ್ನು ತೋರಿಸುತ್ತಿರುವುದರಿಂದ. ಜನ ಸಂಗಾತಿಯನ್ನು ಹುಡುಕುವುದನ್ನು ಬಿಟ್ಟು Perfect Partner ಹುಡುಕುತ್ತಿದ್ದಾರೆ. ದುರಂತ ಏನೆಂದರೆ, ಪರಿಪೂರ್ಣ ವ್ಯಕ್ತಿ ಎಂಬುದು ಅಸ್ತಿತ್ವದಲ್ಲೇ ಇಲ್ಲ. ಯಾರ ಮುಖದಲ್ಲಾದರೂ ಒಂದು ದೋಷ ಇರುತ್ತದೆ, ಯಾರ ಸ್ವಭಾವದಲ್ಲಾದರೂ ಒಂದು ಕೊರತೆ ಇರುತ್ತದೆ. ಇನ್ನೊಂದು ದೊಡ್ಡ ರೋಗ ಎಂದರೆ.. ಅವನು ನನ್ನನ್ನ ಅರ್ಥ ಮಾಡಿಕೊಳ್ಳಬೇಕು.. ಅವಳು ನನ್ನ ಅರ್ಥ ಮಾಡಿಕೊಳ್ಳಬೇಕು ಅನ್ನೋ ಹಠ. ಅರೇ ನಿಮ್ಮ ಪಾರ್ಟ್‌ನರ್ ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಅಂತ ನಿರೀಕ್ಷೆ ಮಾಡೋದನ್ನ ಬಿಟ್ಟು, ಮೊದಲು ನೀವು ಅವರನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸಿ. ನಿಮ್ಮ ಸಂಗಾತಿಯಿಂದ ನಿಮಗೇನು ಖುಷಿ ಸಿಗುತ್ತೆ ಅಂತ ಲೆಕ್ಕ ಹಾಕೋದನ್ನ ಬಿಟ್ಟು, ನಿಮ್ಮಿಂದ ನಿಮ್ಮ ಸಂಗಾತಿಗೆ ಹೇಗೆ ಖುಷಿ ಕೊಡಬಲ್ಲೆ ಅಂತ ಯೋಚಿಸಿ. ಈ ಒಂದು ಬಂಧಕ್ಕೆ ನೀವೇನು contribute ಮಾಡಬಹುದು ಎಂದು ಯೋಚಿಸಿ. ನೀವು ಕೊಡುವ ಪ್ರಾಮಾಣಿಕ ಪ್ರೀತಿ ನೂರು ಪಟ್ಟಾಗಿ ವಾಪಸ್ ಬರುತ್ತದೆ.
ನಾನು ಸೌಂದರ್ಯ, ಆಕರ್ಷಣೆ ಮುಖ್ಯವಲ್ಲ ಅಂತ ಹೇಳ್ತಿಲ್ಲ. ಖಂಡಿತಾ ಬೇಕು.. ಒಳ್ಳೆಯ ಜೋಡಿ ಅನ್ನಿಸಬೇಕು, ಒಳ್ಳೆಯ ಜೋಡಿ ಕೇವಲ ಹೊರನೋಟದಿಂದ, ಸೌಂದರ್ಯದಿಂದ ಅಷ್ಟೇ ಅಲ್ಲ, ನಿಮ್ಮೊಂದಿಗೆ ಬದುಕನ್ನು ಹಂಚಿಕೊಳ್ಳುವುದಕ್ಕೆ ಎಷ್ಟು ಅರ್ಹರು ಅನ್ನೋದರಿಂದ ಜೋಡಿಯಾಗಬೇಕು… ಮದುವೆಯಾಗಿ ಹತ್ತು ವರ್ಷಗಳ ನಂತರ ನಿಮ್ಮ ಮನೆಯ EMI ಕಟ್ಟೋದು ಸೌಂದರ್ಯ ಅಲ್ಲ. ನಿಮ್ಮ ಕುಟುಂಬವನ್ನು, ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳೋದು ಸೌಂದರ್ಯ ಅಲ್ಲ. ನೀವು ಕಾಯಿಲೆ ಬಿದ್ದು ಆಸ್ಪತ್ರೆಯಲ್ಲಿ ಮಲಗಿದಾಗ ಆರೈಕೆಗಾಗಿ ನಿಮ್ಮ ಪಕ್ಕ ಕುಳಿತುಕೊಳ್ಳೋದು ಸೌಂದರ್ಯ ಅಲ್ಲ.. ಅದು ಪ್ಯೂರ್ ಪ್ರೀತಿ, ಕಾಳಜಿ ಮತ್ತು ಬದ್ಧತೆ ಮಾತ್ರ!
ಹಾಗಾಗಿ ಮದುವೆಗೆ ಮುಂಚೆ, ನನಗೆ ಇವಳಿಗಿಂತ ಅಥವಾ ಇವನಿಗಿಂತ ಇನ್ನೂ ಸುಂದರವಾದ ವ್ಯಕ್ತಿ ಸಿಗುತ್ತಾನಾ? ಅಂತ ಕೇಳಿಕೊಳ್ಳಬೇಡಿ. ಬದಲಾಗಿ ಈ ಪ್ರಶ್ನೆ ಕೇಳಿಕೊಳ್ಳಿ..
“ನನ್ನ ಜೀವನದ ಭಿನ್ನ ಸನ್ನಿವೇಶಗಳಲ್ಲೂ, ನಾನು ಸೋತು ಸುಣ್ಣವಾದಾಗಲೂ, ನನ್ನ ಕೈಬಿಡದೆ ನನ್ನ ಜೊತೆ ನಡೆಯುವ ಸಂಗಾತಿ ಇವನಾ? ಇವಳಾ? ಅಂತ.. ಉತ್ತರ ಸಿಕ್ಕರೆ… ಮದುವೆಯ ಅರ್ಧ ಯಶಸ್ಸು ಅಲ್ಲೇ ಶುರುವಾಗುತ್ತದೆ!
– ಸಿದ್ದು ಮಠಪತಿ

