ನೀಟ್ (NEET) ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಜುಲೈ 23ರಂದು ಮಂಗಳೂರಿನ ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಬ್ಬಕ್ಕ ರಾಣಿ ಸರ್ಕಲ್ನಿಂದ ಮಾಸ್ತಿಕಟ್ಟೆ ಸರ್ಕಲ್ವರೆಗೆ ವಿದ್ಯಾರ್ಥಿಗಳ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ Voice of Gen-Z ಸಂಸ್ಥಾಪಕ ಸಲಾಂ ಸಮ್ಮಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಮಾತನಾಡುತ್ತಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ, ಕೇಂದ್ರ ಸರ್ಕಾರವೂ ಈ ಪ್ರಕರಣದ ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಈಗಾಗಲೇ ಪ್ರಾಣ ಕಳೆದುಕೊಂಡಿರುವ 20 ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಲಾಠಿಚಾರ್ಜ್ ನಡೆಸಿದ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ವೇಷದಲ್ಲಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯನ್ನು ಉಳ್ಳಾಲ ವಲಯ Gen-Z ಸಂಘಟನೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮುಫೀದ್ ಮಂಚಿಲ, ಝಹೀಮ್ ಮಂಚಿಲ, ಶಾಹಿಲ್ ಮಂಚಿಲ ಹಾಗೂ ಯು.ಟಿ. ಫರೀದ್ ಸೇರಿದಂತೆ ಸಂಘಟನೆಯ ಪ್ರಮುಖರು ಹಾಗೂ ಹಲವಾರು ವಿದ್ಯಾರ್ಥಿ ಮುಖಂಡರು ಭಾಗವಹಿಸಿ, ವಿದ್ಯಾರ್ಥಿಗಳ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

