ನವದೆಹಲಿ, ಜು. 14: ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪೊಲೀಸ್ ಕಾನ್ಸ್ಟೆಬಲ್ವೊಬ್ಬ ತನ್ನ ಪತ್ನಿಗೆ ರಸ್ತೆ ಮಧ್ಯೆಯೇ ಗುಂಡು ಹಾರಿಸಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ, ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಾಹನವನ್ನು ನಿಲ್ಲಿಸಿದ ಆರೋಪಿ ತನ್ನ ಸರ್ವಿಸ್ ಪಿಸ್ತೂಲ್ನಿಂದ ಪತ್ನಿಯ ಮೇಲೆ ಗುಂಡು ಹಾರಿಸಿ, ಆಕೆಯನ್ನು ರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ದಿನವೇ ಅವರ ಜನ್ಮದಿನವಾಗಿತ್ತು ಎನ್ನಲಾಗಿದೆ. ಕುಟುಂಬದವರು ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಘಟನೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

